ದೈವರಾತರು
	1891 - 1975.  ಚತುರ್ವೇದ ಪಂಡಿತರು.  ಛಂದೋದರ್ಶನ ಎಂಬ ಮಹಾಗ್ರಂಥದ ಕರ್ತೃ.
	ಗೋಕರ್ಣದಲ್ಲಿ ವೈದಿಕ ಬ್ರಾಹ್ಮಣ ಕುಟುಂಬದಲ್ಲಿ ನಾಗವೇಣಿ ಮತ್ತು ವಿಘ್ನೇಶ್ವರ ಭಟ್ಟರ ಮಗನಾಗಿ ಹುಟ್ಟಿದ ಇವರಿಗೆ ಗಣೇಶಶರ್ಮನೆಂದು ನಾಮಕರಣ ಮಾಡಲಾಯಿತು.  ಮುಂದೆ ಇವರು ವಾಸಿಷ್ಠ ಗಣಪತಿ ಮುನಿಗಳ ಶಿಷ್ಯರಾಗಿ ಮಂತ್ರದಷ್ಟಾರರೆನಿಸಿಕೊಂಡು ದೈವರಾತರಾದರು.  ಇವರಿಗೆ ಬಾಲ್ಯ ಶಿಕ್ಷಣವೆಲ್ಲಾ ವೇದವಿದ್ಯಾ ಸಂಪನ್ನರಾದ ತಾಯಿ ತಂದೆಗಳಿಂದಲೇ ದೊರಕಿತು.

	ಮುಂದೆ ಇವರು ಗೋಕರ್ಣಕ್ಕೆ ಆಗಮಿಸಿದ ಉಜ್ಜಯಿನಿ ರಾಮದಾಸರಿಂದ ಭಕ್ತಿ ಯೋಗವನ್ನು ವಾಸುದೇವಾನಂದ ಸರಸ್ವತೀ (ಟೇಂಬೆ ಮಹಾರಾಜ) ಅವರಿಂದ ಹಠಯೋಗ ದೀಕ್ಷೆಯನ್ನೂ ಪಡೆದರು.  ಅನಂತರ ವಾಸಿಷ್ಠ ಗಣಪತಿ ಮುನಿಗಳ ಸೇವೆಯಲ್ಲಿ ನಿರತರಾಗಿ ಅವರೊಡನೆ ಭಾರತದಾದ್ಯಂತ ಪ್ರವಾಸ ಕೈಗೊಂಡು ಅನೇಕ ಪುಣ್ಯಕ್ಷೇತ್ರ ಹಾಗೂ ಪ್ರಮುಖ ನಗರಗಳನ್ನು ಸಂದರ್ಶಿಸಿದರು.  ಅಲ್ಲಿಂದ ಮುಂದೆ ಅರುಣಾಚಲಕ್ಕೆ ಬಂದು ರಮಣ ಮಹರ್ಷಿಗಳ ಸೇವೆಯಲ್ಲಿ ತೊಡಗಿ ಬ್ರಹ್ಮ ಜ್ಞಾನದ ಉಪದೇಶ ಪಡೆದರು.  ಮಹರ್ಷಿಗಳ ಆದೇಶಾನುಸಾರ ತಮ್ಮ ಗುರು ವಸಿಷ್ಠರೊಂದಿಗೆ ಮದ್ರಾಸಿಗೆ ಸಮೀಪದಲ್ಲಿರುವ ಪದವೇಟು ಗ್ರಾಮದ ರೇಣುಕಾಂಬ ಸನ್ನಿಧಿಯಲ್ಲಿ ಶಾರದೀ ನವರಾತ್ರಿಯ ಅನುಷ್ಠಾನದ ತಪಸ್ಸಿನಲ್ಲಿದ್ದಾಗ ಅವರ್ಣನೀಯವಾದ ಮಂತ್ರದರ್ಶನ ಪಡೆದರು.  ಇವರ ಮುಖದಿಂದ ನೂತನ ವೇದಮಂತ್ರಗಳು ಆವಿರ್ಭವಿಸಿದವು.  ಅವುಗಳನ್ನು ಕೇಳಿದ ವಾಸಿಷ್ಠರು ಅವನ್ನು ಆಗಲೇ ಬರೆದುಕೊಂಡು ಅದಕ್ಕೆ ಭಾಷ್ಯವನ್ನು ರಚಿಸಿದರು.  ಅದೇ ಪ್ರಸಿದ್ಧ ಛಂದೋದರ್ಶನ.

	ದೈವರಾತರು ವಿದ್ವತ್‍ಸಭೆಗಳಲ್ಲಿ ನೀಡಿದ ಭಾಷಣಗಳು ಅಸಂಖ್ಯ.  ದೆಹಲಿ, ಗೌಹಾತಿ, ನೇಪಾಳ, ಕಾಶಿ, ಮದ್ರಾಸು, ತಿರುಪತಿ ಮೊದಲಾದೆಡೆ ಜರುಗಿದ ಅಖಿಲಭಾರತ ಮಟ್ಟದ ಸಂಸ್ಕøತಿ ಸಮ್ಮೇಳನ, ವೇದ ಸಮ್ಮೇಳನಗಳಲ್ಲಿ ಕೆಲವಕ್ಕೆ ಅಧ್ಯಕ್ಷರಾಗಿ ಕೆಲವಕ್ಕೆ ಅತಿಥಿಗಳಾಗಿ ಆಯ್ಕೆಗೊಂಡಿದ್ದರು.  1975ರ ಮೇ ತಿಂಗಳಿನಲ್ಲಿ ಹೃಷಿಕೇಶ ಹಾಗೂ ಬೆಂಗಳೂರಿನಲ್ಲಿ ನಡೆದ ಅಂತರಾಷ್ಟ್ರೀಯ ವಿದ್ವತ್ಪರಿಷತ್ತುಗಳಲ್ಲಿ ಭಾಗವಹಿಸಿದ್ದರು.  ಇವರ ಪಾಂಡಿತ್ಯಕ್ಕೆ ಮಾರುಹೋದ ಮಹೇಶಯೋಗಿಗಳು ಫ್ರಾನ್ಸ್, ಇಟಲಿ, ಸ್ಪೇನ್, ಅಮೆರಿಕಗಳಿಗೆ ಇವರನ್ನು ಕರೆದೊಯ್ದು ಇವರಿಂದ ಉಪನ್ಯಾಸಗಳನ್ನು ಮಾಡಿಸಿದರು.

	ಸಂಸ್ಕøತ, ಕನ್ನಡ, ಹಿಂದಿ, ನೇಪಾಳಿ, ತೆಲುಗು, ತಮಿಳು, ಮಲೆಯಾಳಂ - ಹೀಗೆ ಬಹುಭಾಷಾವಿಶಾರದವರಾದ ಇವರಿಗೆ ಕಾಶಿ ಹಿಂದು ವಿಶ್ವವಿದ್ಯಾಲಯದಲ್ಲಿ ಪಂಡಿತ ಮದನ ಮೋಹನ ಮಾಲವೀಯರಿಂದ ವೇದವಾಚಸ್ಪತಿ, ಮುಂಬಯಿಯ ಭಾರತೀಯ ವಿದ್ಯಾಭವನದಿಂದ ವಿದ್ಯಾವಾಚಸ್ಪತಿ, ನೇಪಾಳ ಮಹಾರಾಜರಿಮದ ರಾಜರ್ಷಿ ಎಂಬ ಬಿರುದುಗಳು ಬಂದವು.

	ಇವರ ಛಂದೋದರ್ಶನವೆಂಬ ಬೃಹದ್ಗ್ರಂಥವನ್ನು ಭಾರತೀಯ ವಿದ್ಯಾಭವನ ಪ್ರಕಟಿಸಿದೆ.  ವೇದಾರ್ಥ ಕಲ್ಪತಾ ಮತ್ತು ವಾಕ್‍ಸುಧಾ ಗ್ರಂಥಗಳನ್ನು ಕಲ್ಕತ್ತದ ಮದನಗೋಪಾಲ ಪೋದ್ದಾರ್ ಟ್ರಸ್ಟ್ ಪ್ರಕಟಿಸಿದೆ.  ಪಶುಪತಿಹೃದಯ ನೇಪಾಳಿ, ಹಿಂದಿಭಾಷೆಗಳಲ್ಲಿ ಪ್ರಕಟವಾಗಿದೆ.  ಮೂಲ ಯಜುರ್ವೇದ ಸಂಹಿತಾ, ಇಂದ್ರಯಜ್ಞ, ಸಾಕ್ಷಾತ್ಕಾರ ಯೋಗಸುಧಾ ಇವು ಇವರ ಇತರ ಗ್ರಂಥಗಳು.  ಅಪ್ರಕಟಿತ ಆದರೆ ಪೂರ್ಣ ಬರೆದು ಸಿದ್ಧವಾಗಿರುವ ಹಸ್ತಪ್ರತಿಗಳಲ್ಲಿ ಗಾಯತ್ರಿಸುಧಾ, ಪುರುಷಸೂಕ್ತಸುಧಾ, ವೇದ ವೈದಿಕ್, ವೇದಹೃದಯಂ, ರಾಮರಸಾಯನ, ಅಹಂಪ್ರತ್ಯಯವಿಮರ್ಶ, ಸಪ್ತಮರ್ಯಾದಾ ಸದ್ವಿದ್ಯಾ - ಇವು ಮುಖ್ಯವಾದವು.

	ವೇದ ಉಪನಿಷತ್ತುಗಳನ್ನು ಕುರಿತು ಅಧಿಕಾರವಾಣಿಯಿಂದ ಮಾತನಾಡಬಲ್ಲ ಈ ಪ್ರಕಾಂಡ ಪಂಡಿತರನ್ನು ಚತುರ್ವೇದಗಳ ಜೀವಂತ ಶಬ್ದಕೋಶ ಎಂದು ಬಣ್ಣಿಸಲಾಗಿದೆ.

	ತಂತ್ರದಲ್ಲೂ ಅಷ್ಟೇ ನಿಪುಣರಾದ ಇವರು ಸ್ವತಃ ಹಲವು ನಕ್ಷೆಗಳನ್ನು ರಚಿಸಿದ್ದರು.  ಋಗ್ವೇದದ ಆರಂಭ ಸುಪ್ರಸಿದ್ಧ ಗಾಯತ್ರಿ ಮಂತ್ರದಿಂದಲೇ ಹೊರತು ಸಾಂಪ್ರದಾಯಿಕವಾಗಿ ಒಪ್ಪಿಕೊಂಡಿರುವಂತೆ ಅಗ್ನಿಮೀಳೆಯಿಂದಲ್ಲ ಎಂಬುದಾಗಿ ಇವರು ಸಾಧಿಸಿದ್ದಾರೆ.  ಓಂಕಾರ (ಪ್ರಣವ) ವೈದಿಕವಲ್ಲ.  ವೇದದಲ್ಲಿ ಕಂಡುಬರುವುದು ಮೂಲತಃ ಈಂ ಕಾರವೆಂಬುದು ಇವರ ನಿಶ್ಚಿತಾಭಿಪ್ರಾಯ.

	ಇಂದು ಇವರ ಗುರುಕುಲ ಬ್ರಹ್ಮಚರ್ಯಾಶ್ರಮ ಗೋಕರ್ಣದಿಂದ ಎರಡು ಮೈಲು ದೂರದಲ್ಲಿ ಅಶೋಕವನ ಎಂದು ಪ್ರಸಿದ್ಧಿ ಪಡೆದಿದೆ.  ಇವರ ವಾಙ್ಮಯ ಪ್ರಕಾಶನಕ್ಕಾಗಿ, ಗುರುಕುಲ ಯೋಗಾಶ್ರಮದ ಸಂಘಟನೆಗಾಗಿ ಟ್ರಸ್ಟ್ ಒಂದನ್ನು ರಚಿಸಲಾಗಿದೆ.
(ಎಚ್.ಎಸ್.ಎಚ್.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ